‘ಸಾಗರಮಾಲಾ’ ಮೂಲಕ ಉತ್ತರಕನ್ನಡದ ಸಮುದ್ರ ತೀರ ಮಾರಾಟಕ್ಕೆ?
ಸ್ಥಳೀಯ ಮೀನುಗಾರರಿಂದ ತೀವ್ರ ಪ್ರತಿಭಟನೆ
ಉತ್ತರಕನ್ನಡದ ಮೀನುಗಾರರು, ರೈತರು, ನದಿ ಮತ್ತು ಅರಣ್ಯವನ್ನು ಅವಲಂಬಿಸಿರುವ ಸಮುದಾಯಗಳು ತಲೆತಲಾಂತರದಿಂದ ನೆಲ ಮತ್ತು ಸಮುದ್ರದ ಉಸ್ತುವಾರಿಗಳಾಗಿದ್ದಾರೆ. 2025ರ ನವೆಂಬರ್ನಲ್ಲಿ ಅವರು ಸಮ್ಮೇಳನವೊಂದನ್ನು ನಡೆಸಿ, ತಮ್ಮ ವಲಯದಲ್ಲಿ ಈಗ ನಡೆಯುತ್ತಿರುವ ಮಾದರಿಯ ಅಭಿವೃದ್ಧಿಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ವಿರೋಧವನ್ನು ಪತ್ರಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರದ ಸಚಿವರುಗಳಿಗೆ ತಿಳಿಯಪಡಿಸಿದ್ದಾರೆ.
ಸರಣಿ – 3
2025 ಫೆಬ್ರವರಿಯಲ್ಲಿ ಬೆಂಗಳೂರಿನ ವಿಕಾಸ ಸೌಧದಲ್ಲಿ ಮಹತ್ವದ ಸಭೆಯೊಂದು ನಡೆಯಿತು. ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರಕಾರದ ಮೀನುಗಾರಿಕೆ ಹಾಗೂ ಬಂದರು ಸಚಿವ ಮಂಕಾಳ ಎಸ್. ವೈದ್ಯ ಅಧ್ಯಕ್ಷತೆ ವಹಿಸಿದ ಆ ಸಭೆಯು ಆರ್ಥಿಕ ವರ್ಷ 2025-26ರ ಬಜೆಟ್ ಪೂರ್ವ ಸಭೆಯಾಗಿತ್ತು. ಈ ಸಭೆಯ ಮುಖ್ಯ ವಿಷಯ, ಭಾರತವನ್ನು ಬಂದರು ಮತ್ತು ಕರಾವಳಿ ಮೂಲಸೌಕರ್ಯ ಆಧಾರಿತ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಉದ್ದೇಶದ ಎನ್ಡಿಎ ಸರಕಾರದ ಮಹತ್ವಾಕಾಂಕ್ಷೆಯ ‘ಸಾಗರಮಾಲಾ’ ಯೋಜನೆಯಾಗಿತ್ತು. ಸಭೆಯಲ್ಲಿ ಕರ್ನಾಟಕ ಸಾಗರತೀರ ಮಂಡಳಿ (ಕೆಎಮ್ಬಿ)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ರಾಯ್ಪುರ ಸಾಗರಮಾಲಾ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಸರಕಾರ ಸಂಪೂರ್ಣ ಬದ್ಧವಾಗಿದೆ ಎಂಬುದಾಗಿ ಘೋಷಿಸಿದರು.
ಕರ್ನಾಟಕ ಸರಕಾರವು ಸಾಗರಮಾಲಾ ಯೋಜನೆಗಾಗಿ 2025-26ರ ಹಣಕಾಸು ವರ್ಷಕ್ಕೆ 180 ಕೋಟಿ ರೂ. ಬಜೆಟ್ ಅನುದಾನವನ್ನು ಆಗಲೇ ಒದಗಿಸಿತ್ತು. ಆದರೆ ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸುವಂತೆ ಮೀನುಗಾರಿಕೆ ಹಾಗೂ ಬಂದರು ಸಚಿವರನ್ನು ರಾಯ್ಪುರ ಈ ಸಂದರ್ಭದಲ್ಲಿ ಒತ್ತಾಯಿಸಿದರು.
ರಾಜ್ಯದ ಸಚಿವರೊಬ್ಬರು ಕೇಂದ್ರ ಸರಕಾರದ ಯೋಜನೆಯ ಅನುಷ್ಠಾನಕ್ಕಾಗಿ ಇಷ್ಟೊಂದು ಶ್ರಮ ವಹಿಸುತ್ತಿರುವುದನ್ನು ನೋಡಿ ಕೆಲವರು ಗೊಂದಲಕ್ಕೊಳಗಾಗುವ ಸಾಧ್ಯತೆಯೂ ಇದೆ. ಆದರೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಬಂದರು ಇದರ ಸ್ಪಷ್ಟ ಚಿತ್ರಣವೊಂದನ್ನು ನೀಡುತ್ತದೆ.
ಸರಕಾರಿ-ಖಾಸಗಿ ಭಾಗೀದಾರಿಕೆಯಲ್ಲಿ ಹೊನ್ನಾವರ ಬಂದರನ್ನು ನಡೆಸುವ ಪ್ರಸ್ತಾವ ಮುಂದಿಡಲಾಗಿದೆ. ಇಲ್ಲಿ ಸರಕಾರಿ ಮೂಲಸೌಕರ್ಯ ಕಂಪೆನಿ ಕೆಎಮ್ಬಿ ಮತ್ತು ಹೊನ್ನಾವರ ಬಂದರು ಖಾಸಗಿ ಲಿಮಿಟೆಡ್ (ಎಚ್ಪಿಪಿಎಲ್) ಎಂಬ ಖಾಸಗಿ ಕಂಪೆನಿ ಜೊತೆಯಾಗಿ ಬಂದರಿನ ಉಸ್ತುವಾರಿಯನ್ನು ಹೊತ್ತಿವೆ. ಆದರೆ ಅದಕ್ಕೆ ನಿರ್ಮಿಸಲಾಗುತ್ತಿರುವ ರಸ್ತೆಯು ಸಾಗರಮಾಲಾ ಯೋಜನೆಯಾಗಿದೆ. ಇಂಥ ಉದಾಹರಣೆಗಳು ಹಲವಾರಿವೆ.
ಉತ್ತರಕನ್ನಡದಲ್ಲಿ ಅನುಷ್ಠಾನಗೊಳ್ಳಲಿರುವ ಇಂಥ 15 ಅಭಿವೃದ್ಧಿ ಯೋಜನೆಗಳ ಪೈಕಿ 14 ಕೆಎಮ್ಬಿಗೆ ಸೇರಿದರೆ, ಒಂದು ಸಾಗರಮಾಲಾ ಯೋಜನೆಯಾಗಿದೆ. ಆದರೆ ಈ ಎರಡು ಕಂಪೆನಿಗಳು ಒಂದರೊಳಗೊಂದು ಎಷ್ಟು ಬೆಸೆದುಕೊಂಡಿವೆಯೆಂದರೆ ಮೇಲಿನ ವ್ಯತ್ಯಾಸ ನಗಣ್ಯವಾಗಿದೆ.
ಕೆಎಮ್ಬಿ ಮತ್ತು ಕೇಂದ್ರ ಸರಕಾರದ ನಡುವಿನ ಸಹಕಾರ ಕೆಎಮ್ಬಿಯ ರಚನೆಯಲ್ಲೇ ಇದೆ. ಸಾರ್ವಜನಿಕರ ಅವಗಾಹನೆಗೆ ಲಭ್ಯವಿರುವ ಎಲ್ಲಾ ಬರಹಗಳಲ್ಲಿ ರಾಜ್ಯ ಸಾಗರತೀರ ಮಂಡಳಿಗಳು ಮತ್ತು ರಾಜ್ಯ ಸರಕಾರಗಳ ಸಹಕಾರದ ಅಗತ್ಯವನ್ನು ಪದೇ ಪದೇ ಪುನರುಚ್ಚರಿಸಲಾಗಿದೆ. ಕೆಎಮ್ಬಿ ಬಿಡುಗಡೆಗೊಳಿಸುವ ಬಹುತೇಕ ಎಲ್ಲಾ ವಾರ್ತಾಪತ್ರಗಳಲ್ಲಿ ಸಾಗರಮಾಲಾ ಯೋಜನೆಗೆ ಆದ್ಯತೆ ನೀಡುವಂತೆ ರಾಯ್ಪುರ ರಾಜ್ಯ ಸರಕಾರವನ್ನು ಒತ್ತಾಯಿಸುವುದನ್ನು ಕಾಣಬಹುದಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದ್ಯಾವುದೂ ಅಕ್ರಮ ಅಥವಾ ಅಸಹಜವಲ್ಲ. ಆದರೆ ಯೋಜನೆಯಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳು ಶಾಮೀಲಾದಾಗ ಪರಿಸ್ಥಿತಿ ಹದಗೆಡುತ್ತದೆ.
2025 ಫೆಬ್ರವರಿ 5ರಂದು ಕರ್ನಾಟಕ ಸರಕಾರವು ಸರಕಾರಿ-ಖಾಸಗಿ-ಭಾಗೀದಾರಿಕೆ (ಪಿಪಿಪಿ) ನೀತಿಯನ್ನು ಪ್ರಕಟಿಸಿತು. ಅದು ಇಂಧನ, ಬಂದರುಗಳು ಮತ್ತು ಸಾರಿಗೆ ಸೇರಿದಂತೆ 109 ಕ್ಷೇತ್ರಗಳನ್ನು ಖಾಸಗಿ ಹೂಡಿಕೆಗೆ ತೆರೆಯಿತು. ಪರಿಸರ ಅನುಮೋದನೆ ಸೇರಿದಂತೆ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ಕಠಿಣ ಅನುಮೋದನೆಗಳನ್ನು ತೆಗೆಸಿಕೊಡುವುದಾಗಿಯೂ ಅದು ಘೋಷಿಸಿತು.
ರಾಜ್ಯ ಸರಕಾರದ ಈ ಪಿಪಿಪಿ ನೀತಿಯ ದುಷ್ಪರಿಣಾಮಗಳು ಈಗಾಗಲೇ ಕಾಣಿಸಲು ಆರಂಭಿಸಿವೆ. “ಹೊನ್ನಾವರ ಬಂದರಿನ ಪರಿಸರ ಪರಿಣಾಮ ಅಧ್ಯಯನ (ಇಐಎ) ವರದಿಯಲ್ಲಿ ಕಾಸರಕೋಡು ಮತ್ತು ಕೇಣಿ ಗ್ರಾಮಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಭಾವಿಕೇರಿಯಲ್ಲಿ ಇರುವ ಜನರ ಸಂಖ್ಯೆಯನ್ನೂ ಅವರು ಕಡಿಮೆ ತೋರಿಸಿದ್ದಾರೆ” ಎಂದು ಪರಿಸರ ವಕೀಲೆ ಹಾಗೂ ಲಿವಿಂಗ್ ಅರ್ತ್ ಫೌಂಡೇಶನ್ ಸ್ಥಾಪಕಿ ಶ್ರೀಜಾ ಚಕ್ರವರ್ತಿ ಹೇಳಿದ್ದಾರೆ.
ಹೊನ್ನಾವರದಂತೆ ಬೇಲೆಕೇರಿಯಲ್ಲಿ ಪ್ರಸ್ತಾವಿಸಲಾಗಿರುವ ಬಂದರು ಕೂಡ ಕೆಎಮ್ಬಿ ಬಂದರಾಗಿದೆ. ಆದರೆ ಅದಕ್ಕೆ ಹೊಂದಿಕೊಂಡಿರುವ ಹುಬ್ಬಳ್ಳಿ-ಅಂಕೋಲಾ ರೈಲು ಹಳಿ ಸಾಗರಮಾಲಾ ಯೋಜನೆಯಾಗಿದೆ. ಬೇಲೆಕೇರಿಯಿಂದ 10 ಕಿಲೋಮೀಟರ್ಗಿಂತಲೂ ಕಡಿಮೆ ದೂರದಲ್ಲಿ ಕೇಣಿ ಇದೆ. ಅಲ್ಲಿ ಜೆಎಸ್ಡಬ್ಲ್ಯು-ಕೆಎಮ್ಬಿ ಭಾಗೀದಾರಿಕೆಯಲ್ಲಿ ಬಂದರು ನಿರ್ಮಿಸುವ ಪ್ರಸ್ತಾವ ಇದೆ. ಈ ಬಂದರು ಇಡೀ ಸಮುದ್ರ ತೀರವನ್ನು ನುಂಗಿಹಾಕಲಿದೆ.
ಈ ಎಲ್ಲಾ ಯೋಜನೆಗಳು 10 ಕಿಲೋಮೀಟರ್ ಒಳಗಿನ ಭೌಗೋಳಿಕ ವ್ಯಾಪ್ತಿಯಲ್ಲಿದ್ದರೂ ಅವುಗಳ ಕಾನೂನು ಹೋರಾಟ ಮತ್ತು ಉತ್ತರದಾಯಿತ್ವ ಬಂದರುಗಳು (ಕೇಣಿ ಮತ್ತು ಬೇಲೆಕೇರಿ), ನೀತಿಗಳು (ಪಿಪಿಪಿ ನೀತಿ, ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ, ಕರ್ನಾಟಕ ಸಾಗರತೀರ ಅಭಿವೃದ್ಧಿ ನೀತಿ, ಪರಿಸರ ಪರಿಣಾಮ ಅಧ್ಯಯನ ಅಧಿಸೂಚನೆ ಮುಂತಾದವುಗಳು) ಹಾಗೂ ಜಿಲ್ಲೆ/ರಾಜ್ಯ/ಕೇಂದ್ರೀಯ/ಖಾಸಗಿ ಪ್ರಾಧಿಕಾರಗಳು (ಜಿಲ್ಲಾಡಳಿತ, ಕೆಎಮ್ಬಿ, ಕರ್ನಾಟಕ ರಾಜ್ಯ, ಸಾಗರಮಾಲಾ, ಮೀನುಗಾರಿಕಾ ಸಚಿವಾಲಯ, ಜೆಎಸ್ಡಬ್ಲ್ಯು, ಎಚ್ಪಿಪಿಎಲ್ ಇತ್ಯಾದಿ) ಮುಂತಾದವುಗಳ ನಡುವೆ ಹಂಚಿಹೋಗಿವೆ.
ಉತ್ತರದಾಯಿತ್ವದ ಈ ರೀತಿಯ ವಿಂಗಡಣೆಯು ಈ ಯೋಜನೆಗಳ ವಿರುದ್ಧದ ಕಾನೂನು ಹೋರಾಟವನ್ನು ಮತ್ತಷ್ಟು ವಿಳಂಬಿಸುತ್ತದೆ. ಇಂಥ ವಿಭಜಿತ ಹೋರಾಟವು ನ್ಯಾಯಾಲಯಗಳಲ್ಲಿ ಮುಂದುವರಿಯುತ್ತಿರುವಂತೆಯೇ ಸಮುದ್ರದ ದಂಡೆಯುದ್ದಕ್ಕೂ ಈ ಯೋಜನೆಗಳು ಸ್ಥಾಪನೆಗೊಳ್ಳುತ್ತಾ ಸಾಗುತ್ತವೆ.
“ಇಲ್ಲಿ ನಾವು ಪ್ರಾಕೃತಿಕ ಸಂಪನ್ಮೂಲಗಳ ವ್ಯವಸ್ಥಿತ ವಸಾಹತೀಕರಣವನ್ನು ನೋಡುತ್ತಿದ್ದೇವೆ” ಎಂದು ಚಕ್ರವರ್ತಿ ಹೇಳುತ್ತಾರೆ. ಕರ್ನಾಟಕದ ಮೀನುಗಾರರಿಗೆ ಸಮುದ್ರ ತೀರದ ನೆಡುತೋಪುಗಳು, ಅಳಿವೆಗಳು, ಮೀನುಗಾರಿಕಾ ಸ್ಥಳಗಳು ಮತ್ತು ಸಮುದ್ರ ತೀರಗಳು ಸಮುದ್ರದಷ್ಟೇ ಮಹತ್ವದ್ದಾಗಿವೆ. ಇವುಗಳು ಮೀನುಗಾರಿಕೆ ಆಧಾರಿತ ಜೀವನೋಪಾಯಗಳ ಅಡಿಪಾಯವಾಗಿದೆ. ಅದರಲ್ಲೂ ಮುಖ್ಯವಾಗಿ ಮೀನುಗಾರ ಮಹಿಳೆಯರು ಈ ಸ್ಥಳಗಳನ್ನು ಮೀನು ಒಣಗಿಸಲು ಮತ್ತು ಮಾರಾಟ ಮಾಡಲು ಉಪಯೋಗಿಸುತ್ತಾರೆ.
ಉತ್ತರಕನ್ನಡದ ಮೀನುಗಾರರು, ರೈತರು, ನದಿ ಮತ್ತು ಅರಣ್ಯವನ್ನು ಅವಲಂಬಿಸಿರುವ ಸಮುದಾಯಗಳು ತಲೆತಲಾಂತರದಿಂದ ನೆಲ ಮತ್ತು ಸಮುದ್ರದ ಉಸ್ತುವಾರಿಗಳಾಗಿದ್ದಾರೆ. 2025ರ ನವೆಂಬರ್ನಲ್ಲಿ ಅವರು ಸಮ್ಮೇಳನವೊಂದನ್ನು ನಡೆಸಿ ತಮ್ಮ ವಲಯದಲ್ಲಿ ಈಗ ನಡೆಯುತ್ತಿರುವ ಮಾದರಿಯ ಅಭಿವೃದ್ಧಿಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಈ ಸಮಾವೇಶದಲ್ಲಿ ಐದು ಪ್ರಮುಖ ಬೇಡಿಕೆಗಳನ್ನು ಜನಪ್ರತಿನಿಧಿಗಳ ಮುಂದಿಡಲಾಯಿತು:
- ಸರಿಯಾದ ಪರಿಸರ ಪರಿಣಾಮ ಅಧ್ಯಯನಗಳು ನಡೆಯುವವರೆಗೆ ಎಲ್ಲಾ ಅನುಮೋದನೆಗಳು ಮತ್ತು ಭೂಸ್ವಾಧೀನಗಳನ್ನು ನಿಲ್ಲಿಸಬೇಕು.
- ಸಣ್ಣ ಪ್ರಮಾಣದ ಮೀನುಗಾರಿಕೆ, ಅಳಿವೆ ಸಂಪನ್ಮೂಲಗಳು ಮತ್ತು ಅರಣ್ಯ ಆಧಾರಿತ ಜೀವನೋಪಾಯಗಳ ಸ್ವತಂತ್ರ ಸಾಮಾಜಿಕ-ಆರ್ಥಿಕ ಮೌಲ್ಯಮಾಪನ ನಡೆಸಬೇಕು.
- ಈಗ ಅಸ್ತಿತ್ವದಲ್ಲಿರುವ ಯೋಜನಾ ಅನುಮೋದನೆಗಳ ಕಾನೂನುಬದ್ಧತೆಯ ಮರುಪರಿಶೀಲನೆ ನಡೆಯಬೇಕು.
- ಸಾಂಪ್ರದಾಯಿಕ ಮೀನುಗಾರಿಕಾ ಸಂಪನ್ಮೂಲಗಳು ಮೀನುಗಾರರಿಗೆ ಸೇರಿದ್ದಾಗಿವೆ ಎನ್ನುವುದನ್ನು ಔಪಚಾರಿಕವಾಗಿ ಅಂಗೀಕರಿಸಬೇಕು ಹಾಗೂ ಅವುಗಳನ್ನು ಸ್ಥಳೀಯ ಸಮುದಾಯಗಳಿಗೆ ಮರಳಿಸಬೇಕು.
- ಜನರ ಅಗತ್ಯಗಳು ಮತ್ತು ಬಯಕೆಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಯ ಆದ್ಯತೆಗಳನ್ನು ಪುನರ್ರೂಪಿಸಬೇಕು.
‘ಒಂದು ಉತ್ತರಕನ್ನಡ’ ಎಂಬ ಸಂಘಟನೆಯ ಅಡಿಯಲ್ಲಿ ನಡೆದ ಈ ಜನ ಚಳವಳಿಯು ಜನರ ಜೀವನೋಪಾಯಗಳು, ಜಮೀನುಗಳು ಮತ್ತು ನೀರಿನ ರಕ್ಷಣೆಯನ್ನು ಪ್ರತಿಭಟನೆಯ ಮುಖ್ಯ ವಿಷಯವಾಗಿಸಿತು. ರಾಜ್ಯದ ಕೆಲವು ಸಚಿವರು ಜನರ ಸಾರ್ವಜನಿಕ ವಿಚಾರಣೆಯಲ್ಲಿ ಭಾಗವಹಿಸಿ ಅವರ ಆಕ್ಷೇಪಣೆಗಳನ್ನು ಆಲಿಸಿದ್ದಾರಾದರೂ ನೀತಿ ಅಥವಾ ಕಾನೂನು ಮಟ್ಟದಲ್ಲಿ ಈವರೆಗೆ ಯಾವುದೇ ಬದಲಾವಣೆ ಗೋಚರಿಸಿಲ್ಲ.
ಈ ‘ಅಭಿವೃದ್ಧಿ’ ಸಾಧ್ಯವೇ?
ಕಳೆದ ವರ್ಷದ ಫೆಬ್ರವರಿಯಲ್ಲಿ ನಡೆದ ಮಂಕಾಳ ವೈದ್ಯ ಅಧ್ಯಕ್ಷತೆಯ ಸಭೆಯಲ್ಲಿ ಪದೇ ಪದೇ ಮರುಳಿಸುವ ದೊಡ್ಡ ಸಮಸ್ಯೆಯೊಂದರ ನಿವಾರಣೆಗೆ ಹೆಚ್ಚಿನ ಹಣ ಒದಗಿಸುವಂತೆ ರಾಯ್ಪುರ ಮನವಿ ಮಾಡಿದರು. ಅದೆಂದರೆ ಕಡಲ ಕೊರೆತ. ಅಗಾಧ ಹವಾಮಾನ ಬದಲಾವಣೆಯ ಭೀಕರ ಪರಿಣಾಮಗಳಿಗೆ ಕರ್ನಾಟಕ ಕರಾವಳಿಯೂ ಹೊರತಾಗಿಲ್ಲ. ಕಡಲ ಕೊರೆತ, ಅಕ್ರಮ ಮರಳುಗಾರಿಕೆ, ಜೀವವೈವಿಧ್ಯ ನಾಶ, ಮಣ್ಣು ಮತ್ತು ನೀರು ಮಾಲಿನ್ಯ ಇವೇ ಮುಂತಾದ ಹಾಗೂ ಇನ್ನೂ ಹೆಚ್ಚಿನ ಸಮಸ್ಯೆಗಳು ರಾಜ್ಯದ ಸುಮಾರು 350 ಕಿಲೋಮೀಟರ್ ಕಡಲ ತೀರವನ್ನು ಬಾಧಿಸುತ್ತಿವೆ.
ಕರ್ನಾಟಕ ಕರಾವಳಿಯ ಅರ್ಧ ಭಾಗವು ಅಧಿಕ ಕೊರೆತ ಮತ್ತು ಸಂಚಯದಿಂದಾಗಿ ಅಸ್ಥಿರವಾಗಿದೆ ಎಂದು ಸರಕಾರದ 2024ರ ಅಧ್ಯಯನವೊಂದು ಹೇಳುತ್ತದೆ. ಸಮುದ್ರತೀರದ ಕೊರೆತ ಉಲ್ಬಣಗೊಳ್ಳುತ್ತಿದೆ, ಸಮುದ್ರ ತೀರದ ನಿವಾಸಿಗಳು ಕಂಗಾಲಾಗಿದ್ದಾರೆ, ಪ್ರತಿಭಟನೆಯ ದಾರಿಯನ್ನು ಹಿಡಿದಿದ್ದಾರೆ, ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳು ಬೆಳೆಯುತ್ತಿವೆ.
ಈಗ ಇಲ್ಲಿ ಧುತ್ತೆಂದು ಎದುರಾಗುವ ಪ್ರಶ್ನೆ: ಉತ್ತರಕನ್ನಡವನ್ನು ವಿನಾಶದ ಅಂಚಿಗೆ ಒಯ್ಯುತ್ತಿರುವ ಹೊಣೆಗೇಡಿ ಅಭಿವೃದ್ಧಿ ಮಾದರಿಯನ್ನು ಸಾಗರಮಾಲಾ ಯೋಜನೆಯು ಪ್ರಾಯೋಜಿಸುತ್ತಿದೆಯೇ?
(ಈ ಲೇಖನವು ಸಾಗರಮಾಲಾ ಯೋಜನೆಯ ಹತ್ತು ವರ್ಷಗಳನ್ನು ವಿಶ್ಲೇಷಿಸುವ ‘ದಿ ಕೋಸ್ಟಲ್ ಕೋರ್ಸ್’ ಸರಣಿಯ ಮೂರನೆಯದು. ಲೇಖನ ನಿರ್ಮಾಣದಲ್ಲಿ ‘ಸೆಂಟರ್ ಫಾರ್ ಫೈನಾನ್ಶಿಯಲ್ ಅಕೌಂಟಬಿಲಿಟಿ’ ಮತ್ತು ‘ದೆಹಲಿ ಫೋರಮ್’ ನೆರವು ನೀಡಿವೆ.)
This article was originally published in Vartha Bharathi and you can read here.
