By

ಈಗಾಗಲೇ ಮೊದಲನೇ ಭಾಗದಲ್ಲಿ ಹೇಳಿದಂತೆ ತುಮಕೂರಿನ ಸ್ಮಾರ್ಟ್ ಸಿಟಿ ಯೋಜನೆಯು ಮೊದಲನೇ ಸುತ್ತಿನಲ್ಲಿ ನಿರಾಕರಿಸಲ್ಪಟ್ಟಿತು. ಇದಕ್ಕೆ ಪ್ರಮುಖ ಕಾರಣವೇನೆಂದರೇ ಯೋಜನೆಯು ಕಡಿಮೆ ಪ್ರದೇಶವನ್ನು ಒಳಗೊಂಡಿತ್ತು. ಅದರಲ್ಲಿ ೨.೫ ರಷ್ಟು ಜನಸಂಖ್ಯೆ ಇರುವ ಶೇ.೮ ರಷ್ಟು ಭೂ ಪ್ರದೇಶವನ್ನು ಪ್ರಮುಖ ಯೋಜನೆಗೆ ಸೂಚಿಸಲಾಗಿತ್ತು. ಆಯ್ಕೆಯಾದ ಪ್ರದೇಶಗಳೆಲ್ಲವೂ (ವಾರ್ಡ್ ೫, ೧೪, ೧೫ ಮತ್ತು ೧೬ ಜೊತೆಗೆ ಅಮಾನೀಕೆರೆ ಪ್ರದೇಶ) ನಗರದ ಪ್ರಮುಖ ವ್ಯಾಪಾರ ವಹಿವಾಟಿನ ಪ್ರದೇಶಗಳಾಗಿದ್ದವು. ಆ ನಂತರ ಈ ಯೋಜನೆಯು ತಿದ್ದುಪಡಿಯಾದಾಗ ನಾಗರೀಕರ ಯಾವುದೇ ರೀತಿಯ ಭಾಗವಹಿಸುವಿಕೆ ಇರಲಿಲ್ಲ. ಬದಲಿಗೆ ಅದರಲ್ಲಿ ಸಂಪೂರ್ಣವಾಗಿ ಖಾಸಗಿ ಸಮಾಲೋಚಕರನ್ನು ನಿಯೋಜಿಸಲಾಗಿತ್ತು. ಅವರು ಯೋಜನೆಗೆ ಮತ್ತಷ್ಟು ವಾರ್ಡ್ಗಳನ್ನು(, ೭ರಲ್ಲಿ ಕೆಲವು ಭಾಗಗಳು ಹಾಗೂ ೧೯) ಸೇರಿಸಿ ಯೋಜನೆಯನ್ನು ತಿದ್ದುಪಡಿ ಮಾಡಿಸಿದ್ದರು. ವಾರ್ಡ್ ೧೯ನ್ನು ಸೇರಿಸಲು ಪ್ರಮುಖ ಕಾರಣವೆಂದರೇ ಆ ವಾರ್ಡ್ನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಗರ ವಂಚಿತ ಸಮುದಾಯಗಳಿದ್ದವು. ಇದನ್ನು ತಿದ್ದುಪಡಿ ಮಾಡಿಸಿದ ನಂತರ ಈ ಯೋಜನೆಯಲ್ಲಿ ನಗರದ ಶೇ. ೧೧ರಷ್ಟು ಭೂ ಪ್ರದೇಶ ಮತ್ತು ಶೇ. ೧೪ರಷ್ಟು ಜನ ಸಂಖ್ಯೆಯನ್ನು ಒಳಗೊಂಡಾತಾಯಿತು. ತುಮಕೂರು ಸ್ಮಾರ್ಟ್ ಸಿಟಿಯ ಗುರಿಯ ವಿವರಣೆಯಲ್ಲಿ ಈಗಾಗಲೇ ಇದ್ದ “ಜ್ಞಾನ ಹಾಗೂ ಕೈಗಾರಿಕಾ ಹೊಸ ಆಯ್ಕೆಯ ಕೇಂದ್ರ’’ ಎಂಬುದರಿಂದ ತುಮಕೂರು ನಗರವನ್ನು ಬೆಂಗಳೂರು ನಗರದ ಕೊನೆಯಲ್ಲಿರುವ ಭಾಗವೆಂಬುದರಿಂದಲೂ ಅತ್ಯಂತ ಆದ್ಯತೆಯ ಸ್ಥಳವಾಗಿ ಪರಿವರ್ತಿಸುವುದು’’ ಎಂದು ಬದಲಾಯಿಸಲಾಗಿತ್ತು.

ಯೋಜನೆಯ ಈಗಿನ ಘೋಷ ವಾಖ್ಯ ಎಂದರೆ “ಅರ್ಥಿಕ ಅಭಿವೃದ್ಧಿ ಮತ್ತು ಸುಧಾರಿತ ಸಂಪರ್ಕಕ್ಕೆ ಹೆಚ್ಚಿನ ಗಮನ ಉನ್ನತ ಮಟ್ಟದ ಜೀವನ ಪರಿಸರ ಮತ್ತು ಒಳಗೊಳ್ಳುವ ಅಭಿವೃದ್ಧಿ” ಎಂದಾಗಿದೆ. ಇದರಲ್ಲಿ ಎಲ್ಲಾ ಅಂಶಗಳಿಗೂ ಸಮಾನ ಗಮನ ನೀಡಲಾಗುವುದು. ಎಂದು ಹೇಳಲಾಗಿದ್ದರೂ ನಗರದ ಮಧ್ಯ ಭಾಗದ ಸಂಪರ್ಕ ಹಾಗೂ ಸಾರಿಗೆ ಮೂಲಸೌಕರ್ಯಕ್ಕೆ ಸ್ಮಾರ್ಟ್ ಸಿಟಿ ಯೋಜನೆಯ ಶೇ. ೬೦ರಷ್ಟು ಹಣವನ್ನು ಮೀಸಲಿಡಲಾಗಿದೆ. ಉಳಿದಂತೆ ಜೀವನ ಮಟ್ಟ ಸುಧಾರಣೆಗಳಿಗಾದ ದಿನದ ೨೪ ಗಂಟೆಗಳು ನೀರಿನ ಸರಬರಾಜು, ಒಳಚರಂಡಿ, ಬಡವರಿಗೆ ಮನೆಗಳು ಮುಂತಾದವುಗಳಿಗೆ ಸಣ್ಣ ಪ್ರಮಾಣದ ಹಣವನ್ನು ಯೋಜನೆಯಲ್ಲಿ ಮೀಸಲಿಡಲಾಗಿದ್ದು, ಇದಕ್ಕೆ ಉಳಿದ ಹಣವು ಸರ್ಕಾರದ ವಿವಿಧ ಯೋಜನೆಗಳಿಂದ ಖರ್ಚು ಮಾಡಲಾಗುವುದು ಎಂದು ತಿಳಿಸಲಾಗಿದೆ. ಈ ಯೋಜನೆಗೆ ನೀರಿನ ಸರಬರಾಜು, ಒಳಚರಂಡಿ ಮಳೆ ನೀರಿನ ಕಾಲುವೆಗಳು ಅನಿಲ ಪೂರೈಕೆ ವ್ಯವಸ್ಥೆ, ಘನ ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಶೌಚಾಲಯ, ಕೈಗೆಟುಕುವ ದರದಲ್ಲಿ ಮನೆಗಳು ಮುಂತಾದವು ಸ್ಮಾರ್ಟ್ ಸಿಟಿ ಯೋಜನೆ ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಎಂಬಂತೆ ನಮೂದಿಸಲಾಗಿದ್ದು, ಶೇ. .೨೦ ರಷ್ಟು ಹಣವನ್ನು ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯ ಹಣದಿಂದ ಮೀಸಲಿಡಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯ ತಿದ್ದುಪಡಿಯ ಸಂದರ್ಭದಲ್ಲಿ ಈ ಕೆಳಕಂಡ ಸಮಸ್ಯೆಗಳು ಕಂಡು ಬಂದವು.

  1. ಸ್ಮಾರ್ಟ್ ಸಿಟಿ ಯೋಜನೆಯ ರೂಪುರೇಷೆ ತಯಾರಿಕೆ ವಿಧಾನದಲ್ಲಿ ನಾಗರೀಕರ ಭಾಗವಹಿಸುವಿಕೆಯು ಎಲ್ಲರನ್ನೂ ಒಳಗೊಂಡಿರಲಿಲ್ಲ. ಪ್ರಮುಖವಾಗಿ ನಗರ ವಂಚಿತ ಸಮುದಾಯಗಳನ್ನು ಈ ಪ್ರಕ್ರಿಯೆಯಿಂದ ಹೊರಗಿಡಲಾಯಿತು.

  2. ಈ ಹೊರಗಿಟ್ಟ ಪ್ರಕ್ರಿಯೆಯು ಯೋಜನೆಗಾದ ಆಯ್ಕೆಗಳು ಮತ್ತು ವಿಷಯಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತಿತ್ತು.

  3. ಕೈಗೆಟುಕುವ ದರದಲ್ಲಿ ಮನೆಗಳು, ಕೌಶಲ್ಯಾಭಿವೃದ್ಧಿ ಮುಂತಾದ ಬಡವರ ಬೇಡಿಕೆಗಳು ಈ ಯೋಜನೆಯ ರೂಪುರೇಷೆಯಲ್ಲಿ ಆದ್ಯತೆಯಾಗಲಿಲ್ಲ. ಈ ವಿಭಾಗ ಸಂಬಂಧಿಸಿದ ಯೋಜನೆಗಳಿಗೆ ಸ್ಮಾರ್ಟ್ಸಿಟಿ ಯೋಜನೆಯ ಹಣವನ್ನು ಮೀಸಲಿಡುವ ಬದಲು ಅವುಗಳನ್ನು ಇತರೇ ಯೋಜನೆಗಳಿಂದ ವೆಚ್ಚ ಮಾಡಲಾಗುವುದು ಎಂಬ ಒಕ್ಕಣೆಯು ಸೇರ್ಪಡೆಗೊಂಡಿತು.

  4. ಪ್ರದೇಶಾಭಿವೃದ್ಧಿ ಯೋಜನೆಗೆ ಆಯ್ಕೆಯಾದ ವಾರ್ಡ್ಗಳಲ್ಲಿ ಜಾತಿ ಹಾಗೂ ವರ್ಗ ಆಧಾರಿತವಾಗಿ ನಗರ ವಂಚಿತ ಸಮುದಾಯಗಳು ವಾಸ ಮಾಡುವ ಪ್ರದೇಶಗಳ ಬದಲಾಗಿ ಈಗಾಗಲೇ ಅಭಿವೃದ್ಧಿ ಹೊಂದಿರುವ ಮಧ್ಯಮ ಹಾಗೂ ದಲಿತೇತರ ವರ್ಗಗಳು ವಾಸ ಮಾಡುವ ವಾರ್ಡ್ಗಳನ್ನು ಆದ್ಯತೆ ಮೇಲೆ ಆಯ್ಕೆ ಮಾಡಲಾಯಿತು.

  5. ತಿದ್ದುಪಡಿ ಮಾಡಲಾದ ಯೋಜನೆಯಲ್ಲಿ ಜನಸಂಖ್ಯೆ ಹೆಚ್ಚಳಕ್ಕಾಗಿಯಷ್ಟೇ ನಗರ ವಂಚಿತ ಪ್ರದೇಶಗಳು ಸೇರಿಸಲಾಗಿದ್ದರೂ ಈ ಯೋಜನೆಯ ಖರ್ಚು ವೆಚ್ಚದಲ್ಲಿ ಈ ಜನರನ್ನು ಹೊರಗಿಡಲಾಗಿದೆ.

ಸ್ಮಾರ್ಟ್ಸಿಟಿ ಯೋಜನೆಯ ಜಾರಿ

ಸ್ಮಾರ್ಟ್ಸಿಟಿ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಸಮಾನ ಪಾಲುದಾರಿಕೆಯೊಂದಿಗೆ, ಸಾರ್ವಜನಿಕ ಕಂಪನಿಯನ್ನು ಪ್ರಾರಂಭಿಸಲಾಯಿತು. ಈ ಕಂಪನಿಗೆ ಒಕ್ಕೂಟ ಸರ್ಕಾರವು ಒಬ್ಬ ನಿರ್ದೇಶಕರನ್ನು ನಾಮ ನಿರ್ದೇಶನ ಮಾಡಿದರೆ ರಾಜ್ಯ ಸರ್ಕಾರ ೮ ನಿರ್ದೇಶಕರನ್ನು ನಾಮ ನಿರ್ದೇಶನ ಮಾಡುತ್ತದೆ.(ಇದರಲ್ಲಿ ಇಬ್ಬರು ಸ್ವತಂತ್ರ ನಿರ್ದೇಶಕರು ಅಡಕ) ಇದರಲ್ಲಿ ಜಿಲ್ಲಾ ಉಪ ಆಯುಕ್ತರು ಹಾಗೂ ಸ್ಥಳೀಯ ನಗರ ಆಡಳಿತದಿಂದ ೬ ನಿರ್ದೇಶಕರು ಇರುತ್ತಾರೆ. ಈ ಕಂಪನಿಯನ್ನು ವಿಶೇಷ ಉದ್ದೇಶಿತ ವಾಹಕ(ಸ್ಪೆಷಲ್ ಪರ್ಪಸ್ ವೆಹಿಕಲ್) ಎಂದು ಕರೆಯಲಾಗುತ್ತದೆ. ಇದಕ್ಕೆ ನೀಡಲಾಗಿರುವ ಅಧಿಕಾರಗಳು ಕೆಳಕಂಡಂತಿವೆ.

ಸ್ಮಾರ್ಟ್ಸಿಟಿ ಯೋಜನೆಗಾಗಿ ಪಾಲಿಕೆಯ ಹಕ್ಕುಗಳು ಹಾಗೂ ಭಾದ್ಯತೆಗಳು ನಗರ ಪಾಲಿಕೆ ಕಾಯಿದೆ ಹಾಗೂ ಸರ್ಕಾರದ ನಿಯಮಗಳ ಅಡಿಯಲ್ಲಿ ನಗರ ಸಭೆಯ ಎಲ್ಲಾ ಅಧಿಕಾರಗಳನ್ನು ಈ ವಿಶೇಷ ಯೋಜಿತ ವಾಹಕದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗೆ ನೀಡಲಾಗಿದೆ.

ನಗರಾಭಿವೃದ್ಧಿ ಇಲಾಖೆ/ಪುರಸಭೆ ಆಡಳಿತ ಇಲಾಖೆ ಮುಂತಾದವುಗಳಿಗೆ ಯೋಜನೆಯ ಮಂಜೂರಾತಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಈ ಕಂಪನಿಯ ನಿರ್ದೇಶಕ ಮಂಡಳಿಗೆ ನೀಡಲಾಗಿದೆ.

ಈ ಅಧಿಕಾರಗಳನ್ನು ಕಂಪನಿಗೆ ನೀಡಲು ನಗರ ಪಾಲಿಕೆ ಕಾಯಿದೆಗೆ ತಿದ್ದುಪಡಿ ತರಬೇಕಿತ್ತು. ಆದರೆ ಚುನಾಯಿತ ಪ್ರತಿನಿಧಿಗಳು ಚುನಾಯಿತರಲ್ಲದ ಕಂಪನಿಗೆ ಈ ಅಧಿಕಾರವನ್ನು ನೀಡುವುದನ್ನು ವಿರೋಧಿಸಿದ ಕಾರಣ ಇವುಗಳನ್ನು ಹಿಂಪಡೆಯಲಾಯಿತಾದರೂ, ಇನ್ನೂ ಹಲವು ಅಧಿಕಾರಗಳನ್ನು ಕಂಪನಿಗೆ ನೀಡಲಾಗಿದೆ. ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕರು ರೂಪಾಯಿ ೧೦ ಕೋಟಿಯವರೆಗಿನ ಟೆಂಡರ್‌ಗಳಿಗೆ ಅನುಮೋದನೆ ನೀಡಬಹುದು. ನಿರ್ದೇಶಕ ಮಂಡಳಿಯು ೫೦ ಕೋಟಿಯವರೆಗಿನ ಟೆಂಡರ್‌ಗಳಿಗೆ ಅನುಮೋದನೆ ನೀಡಬಹುದು. ೫೦ ಕೋಟಿಗೂ ಮೇಲಿನ ಯೋಜನೆಗೆ ಅನುಮತಿ ಬೇಕಿದ್ದಲ್ಲಿ ಈ ಕಂಪನಿಯು ರಾಜ್ಯ ಮಟ್ಟದ ವಿಶೇಷ ಅಧಿಕಾರದ ಸಮಿತಿಯನ್ನು ಸಂಪರ್ಕಿಸಬೇಕು.

ರಾಜ್ಯ ಮಟ್ಟದ ವಿಶೇಷ ಅಧಿಕಾರದ ಸಮಿತಿಯೊಂದಿಗೆ ನಗರ ಮಟ್ಟದ ಸಮಾಲೋಚನಾ ನಗರ ಮಟ್ಟದ ಸಲಹಾ ಸಮಿತಿಯನ್ನು ಪ್ರತಿ ನಗರದಲ್ಲೂ ಸ್ಥಾಪಿಸಲಾಗುತ್ತದೆ. ಈ ಸಮಿತಿಯು ಸ್ಮಾರ್ಟ್ಸಿಟಿ ಯೋಜನೆಯ ಜಾರಿಯಲ್ಲಿ ತಮ್ಮ ಸಲಹೆಗಳನ್ನು ನೀಡಲಿದೆ. ನಗರ ಮಟ್ಟದ ಸಲಹಾ ಸಮಿತಿಯಲ್ಲಿ ಕೊಳಗೇರಿ ನಿವಾಸಿ ಸಂಘಗಳು, ಯುವಕ ಸಂಘಗಳು, ತೆರಿಗೆದಾರರ ಸಂಘಗಳು, ಉಪ ಆಯುಕ್ತರಂತಹ ಸರ್ಕಾರೀ ಅಧಿಕಾರಿಗಳು, ನಗರ ಸಭೆಯ ಆಯುಕ್ತರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಎಂಎಲ್‌ಎ, ಎಂಪಿ, ಮೇಯರ್, ಉಪಮೇಯರ್ ಮುಂತಾದ ಚುನಾಯಿತ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಕರ್ನಾಟಕದಲ್ಲಿ ಚುನಾಯಿತ ಪ್ರತಿನಿಧಿಗಳ ಒತ್ತಾಯದಿಂದ ಜಿಲ್ಲಾ ಮಟ್ಟದ ಜಾರಿ ಹಾಗೂ ಮರು ಪರಿಶೀಲನಾ ಸಮಿತಿಯೆಂಬ ಹೊಸ ಒಂದು ಸಮಿತಿಯನ್ನು ಪರಿಚಯಿಸಲಾಯಿತು. ಜಿಲ್ಲಾ ಮಟ್ಟದ ಸಮಿತಿಗಳಲ್ಲಿ ನಾಗರೀಕ ಸಮುದಾಯದ ಯಾರೂ ಕೂಡಾ ಭಾಗವಹಿಸಲು ಅವಕಾಶ ನೀಡಲಾಗಿಲ್ಲ. ಬದಲಿಗೆ ಸರ್ಕಾರೀ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಈ ಸ್ಮಾರ್ಟ್ಸಿಟಿ ಯೋಜನೆಯನ್ನು ಜಾರಿ ಮಾಡುವುದು ಮಾತ್ರ ಈ ಕಂಪನಿಯ ಕೆಲಸವಾಗಿದೆ. ಉಳಿದಂತೆ ಇದರಲ್ಲಿ ಏನಾದರೂ ಬದಲಾವಣೆಯಾಗಬೇಕೆಂದರೇ ಅದಕ್ಕೆ ರಾಜ್ಯ ಮಟ್ಟದ ವಿಶೇಷ ಅಧಿಕಾರ ಸಮಿತಿ ಅನುಮೋದನೆ ನೀಡಬೇಕು. ನಿಜಾರ್ಥದಲ್ಲಿ ತುಮಕೂರು ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಅದರ ಗುರಿ ಉದ್ದೇಶ ಸೇರಿದಂತೆ ಹಲವು ತಿದ್ದುಪಡಿಗಳನ್ನು ಮಾಡಲಾಗಿದೆ. ಮೊದಲ ಯೋಜನಾ ವರದಿಯನ್ನು ಒಂದು ಸಲಹಾ ಸಂಸ್ಥೆ ರೂಪಿಸಿತು. ಅದು ಒಪ್ಪಿಗೆಯಾಗದ ಕಾರಣ ಇನ್ನೊಂದು ಸಂಸ್ಥೆಯನ್ನು ಅವುಗಳ ತಿದ್ದುಪಡಿಗೆ ನೇಮಿಸಲಾಯಿತು. ಈಗ ಯೋಜನಾ ಮೇಲ್ವಿಚಾರಣೆಗೆ ಒಂದು ಖಾಸಗೀ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ.

ಹಲವು ಬದಲಾವಣೆಗಳನ್ನು ಕಂಡ ಈ ಯೋಜನೆಯು ಅಂತಿಮವಾಗಿ ರಸ್ತೆ ಅಭಿವೃದ್ಧಿಗೆ ಮಾತ್ರ ಆದ್ಯತೆ ಕೊಡುವಂತೆ ಏರಿಯಾ ಅಭಿವೃದ್ಧಿ ಯೋಜನೆಯ ಶೇ.೫೦ ರಷ್ಟು ಹಣವನ್ನು ರಸ್ತೆಯ ಅಭಿವೃದ್ಧಿಗೆ ಮೀಸಲಿಡಲಾಗಿತ್ತು. ಸ್ಮಾರ್ಟ್ಸಿಟಿ ಯೋಜನೆ ಅಡಿಯಲ್ಲಿ ಕೇಂದ್ರ ಭಾಗದ ೩ ಸ್ಲಂಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿರುವ ೩೮೦೨ ಮನೆಗಳಲ್ಲಿ ೩೫೩ ಮನೆಗಳನ್ನು ಸ್ಥಳದಲ್ಲೇ ಪ್ರಧಾನ ಮಂತ್ರಿ ಆವಾಜ್ ಯೋಜನೆಯ ಹಣವನ್ನು ಒಳಗೊಂಡಂತೆ ೭೩ ಕೋಟಿ ರೂಪಾಯಿಗಳ ಯೋಜನೆ ಸಿದ್ಧವಾಗಿತ್ತು. ಅಂತಿಮವಾಗಿ ಮಾರಿಯಮ್ಮ ನಗರದ ಬರೀ ೮೭ ಮನೆಗಳನ್ನು ಅಂತಿಮಗೊಳಿಸಲಾಯಿತು.

ಈ ಬದಲಾವಣೆಗಳಿಗಾದ ಕಾರಣಗಳೆಂದರೇ..

  1. ಮೊದಲನೇ ಸುತ್ತಿನ ಆಯ್ಕೆ ಸಂದರ್ಭದಲ್ಲಿ ಕೆಲವು ಯೋಜನೆಗಳನ್ನು ಸೇರಿಸಲಾಗಿದ್ದು, ಯೋಜನೆ ಜಾರಿಗಾಗಿ ಒಂದೂವರೆ ವರ್ಷಗಳು ವಿಳಂಬವಾದ ಕಾರಣ ಈಗಾಗಲೇ ಹಲವು ಇಲಾಖೆಗಳು ತಾವೇ ಅವುಗಳನ್ನು ಪ್ರಾರಂಭಿಸಿದವು.

  2. ಎರಡನೇಯದಾಗಿ ಕಾರ್ಯ ಸಾಧ್ಯತೆ ಅಧ್ಯಾಯನಗಳು ಮಾಡಿದಾಗ ಹಲವು ಯೋಜನೆಗಳು ಅಸಾಧ್ಯವಾದುದು ಎಂದು ಕಂಡು ಬಂದಿತ್ತು. ಪ್ರಮುಖವಾಗಿ ಸಾರ್ವಜನಿಕ ಖಾಸಗೀ ಸಹಭಾಗಿತ್ವದ ಹಲವು ಯೋಜನೆಗಳನ್ನು ಕೈ ಬಿಡಲಾಯಿತು ಅಥವಾ ತಿದ್ದುಪಡಿ ಮಾಡಲಾಯಿತು.

  3. ಕಂಪನಿಯು ಕೈಗೊಂಡ ಯೋಜನೆಗಳು ಇತರೇ ಹಲವು ಇಲಾಖೆಗಳ ಅಡಿಯಲ್ಲಿನ ಯೋಜನೆಗಳಾದ ಕಾರಣ ಆ ಇಲಾಖೆಗಳು ಅದಕ್ಕೆ ವಿರೋಧ ವ್ಯಕ್ತ ಪಡಿಸಿದವು.

  4. ೨೦೧೮ರ ವಿಧಾನಸಭೆ ಚುನಾವಣೆ ನಂತರ ಹೊಸದಾಗಿ ಆಯ್ಕೆಯಾದ ಎಂಎಲ್‌ಎಗಳು ತಮ್ಮ ಆದ್ಯತೆಯ ಯೋಜನೆಗಳನ್ನು ಇದಕ್ಕೆ ಸೇರಿಸಲು ಒತ್ತಾಯ ಮಾಡಿದ್ದರು.

  5. ಅಂತಿಮವಾಗಿ ನಗರದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಸಾಗಬೇಕಾದ ಸ್ಮಾರ್ಟ್ಸಿಟಿ ಯೋಜನೆಯು ಹಲವು ಹಿತಾಸಕ್ತಿಗಳ ಒತ್ತಾಯದ ಕಾರಣಕ್ಕೆ ಬಿಡಿ ಬಿಡಿ ಯೋಜನೆಗಳಾಗಿ ಕಂಡು ಬಂದವು. ಇದಕ್ಕೆ ಪ್ರಮುಖ ಕಾರಣ ಚುನಾಯಿತ ಪ್ರತಿನಿಧಿಗಳು ಸಂಘಟಿತ ಸಾಮಾಜಿಕ ಗುಂಪುಗಳು ಹಾಗೂ ಸರ್ಕಾರೀ ಇಲಾಖೆಗಳ ಒತ್ತಾಯವು ಕಾರಣವಾಯಿತು.

ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯ ಪ್ರಗತಿ

ಯೋಜನೆಯ ಪ್ರಾರಂಭಿಕ ವರ್ಷಗಳಲ್ಲಿ ಅತಿ ವಿಳಂಬದಿಂದ ಮುನ್ನಡೆದ ಕಾರಣ ಸ್ಮಾರ್ಟ್ಸಿಟಿ ಕಂಪನಿಯು ಹೆಚ್ಚು ವಿಮರ್ಶೆಗೆ ಗುರಿಯಾಯಿತು. ಸೆಪ್ಟೆಂಬರ್ ೨೦೧೮ರಲ್ಲಿ ಅಂದರೇ ಕಂಪನಿ ಪ್ರಾರಂಭಿಸಿ ಒಂದೂವರೆ ವರ್ಷದ ನಂತರ ಸ್ಮಾರ್ಟ್ಸಿಟಿ ಯೋಜನೆಯ ಅನುದಾನದಲ್ಲಿ ಶೇ.೨ ರಷ್ಟನ್ನು ಅಂದರೇ ೧.೬೩ ಕೋಟಿ ರೂಪಾಯಿಗಳ ಯೋಜನೆಗಳು ಮಾತ್ರ ಪೂರ್ಣಗೊಂಡಿತ್ತು ಮತ್ತು ೭.೯೩ ಕೋಟಿ ರೂಪಾಯಿಗಳ ಯೋಜನೆಗಳು ಜಾರಿಯಲ್ಲಿದ್ದವು. ಸಮಾಲೋಚಕರ ನೇಮಕ ಸ್ಥಳೀಯ ಭಾಷೆ ಹಾಗೂ ನಗರದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ್ದು ಈ ವಿಳಂಬಕ್ಕೆ ಕಾರಣವಾಗಿತ್ತು. ಜೊತೆಗೆ ಕಂಪನಿಗೆ ಕಾರ್ಯ ನಿರ್ವಾಹಕ ನಿರ್ದೇಶಕರು ಪೂರ್ಣಕಾಲಿಕವಾಗಿರಲಿಲ್ಲ. ಯೋಜನೆಯಲ್ಲಿ ಪದೇ ಪದೇ ಬದಲಾವಣೆಯಾಗಿದ್ದು ಮುಂತಾದವು ಈ ವಿಳಂಬಕ್ಕೆ ಕಾರಣವಾದವು.

ಇವುಗಳನ್ನು ಸರಿಪಡಿಸಲು ಮೂರು ತರದ ವಿಧಾನಗಳನ್ನು ಯೋಜನೆಯ ನಿರ್ವಹಣೆಗೆ ಸೇರಿಸಿಕೊಳ್ಳಲಾಗಿತ್ತು. ಮೊದಲಿಗೆ ರಾಜ್ಯ ಮಟ್ಟದ ವಿಶೇಷ ಅಧಿಕಾರದ ಸಮಿತಿ ಹಾಗೂ ನಗರಾಭಿವೃದ್ಧಿ ಇಲಾಖೆ ಯೋಜನೆಯ ಗುತ್ತಿಗೆ ನೀಡಲು ಕಾಲಮಿತಿ ನಿಗದಿಗೊಳಿಸಿತ್ತು. ಅದಕ್ಕೆ ಕೆಲಸದ ಆದೇಶಗಳು ಯೋಜನೆಯು ಸಂಪೂರ್ಣವಾಗಿರುವುದನ್ನು ಪರಿಶೀಲಿಸುವುದು ಹಾಗೂ ಪ್ರಗತಿ ಕುರಿತು ಆಗಾಗ ಸಭೆಗಳನ್ನು ಮಾಡುವುದು. ಎರಡನೇಯದಾಗಿ ನಗರಾಭಿವೃದ್ಧಿ ಇಲಾಖೆಯು ಆದ್ಯತೆ ಮೇರೆಗೆ ಯೋಜನೆಗಳನ್ನು ಜಾರಿ ಮಾಡಲು ಹಲವು ಸಂದರ್ಭಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆಯನ್ನು ನೀಡಿತ್ತು. ಕಾರಣ ಈ ಯೋಜನೆಯ ಮೈಲುಗಲ್ಲನ್ನು ಅವರಿಗೆ ಅಭಿವೃದ್ಧಿಯಾಗಿದೆ ಎಂದು ತೋರಿಸಬೇಕಿತ್ತು. ಮುರನೇಯದಾಗಿ ಯೋಜನೆಯ ಪೂರ್ಣಗೊಳ್ಳುವಿಕೆಯ ಪ್ರಮಾಣವನ್ನು ಹೆಚ್ಚಾಗಿ ತೋರಿಸಲು ಒಂದೇ ಯೋಜನೆಯನ್ನು ಹಲವು ಭಾಗ ಹಾಗೂ ಉಪಭಾಗಗಳಾಗಿ ವಿಂಗಡಿಸಿ ಟೆಂಡರ್ ನೀಡಲಾಯಿತು.

ಯಾಕೆಂದರೇ ಕೇಂದ್ರ ಬಸ್ ನಿಲ್ದಾಣ, ಕ್ರೀಡಾಂಗಣ, ನಗರ ಗ್ರಂಥಾಲಯ, ಅಪಘಾತ ಪುನಶ್ಚೇತನ ಕೇಂದ್ರ, ರಿಂಗ್ ರಸ್ತೆಯ ಅಭಿವೃದ್ಧಿ ಮುಂತಾದವು ದೊಡ್ಡ ಯೋಜನೆಗಳಾಗಿದ್ದು, ಅವುಗಳನ್ನು ಸಣ್ಣ ಭಾಗಗಳಾಗಿ ವಿಂಗಡಿಸಬೇಕಾಗಿತ್ತು. ಕೆಲವು ದೊಡ್ಡ ಯೋಜನೆಗಳನ್ನು ವಿಳಂಬವಾಗಿ ಪ್ರಾರಂಭಿಸಲಾಗಿದ್ದು ಅವು ಇನ್ನು ಪೂರ್ಣಗೊಳ್ಳಬೇಕಿದೆ. ನಗರ ಮಟ್ಟದ ನಾಗರೀಕರ ಸಮಾಲೋಚನಾ ಸಮಿತಿಯಲ್ಲಿ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿ ಚರ್ಚಿಸಿದ ನಂತರ ಅಲ್ಲಿಂದ ಸಲಹೆಗಳನ್ನು ಪಡೆಯಬೇಕಿತ್ತು. ಆದರೆ ಈ ಸಮಿತಿಯು ಬರೀ ಸಮಾಲೋಚನಾ ಸಮಿತಿಯಾಗಿದ್ದ ಕಾರಣ ಮಾಹಿತಿ ಹಂಚಿದರೂ ಹೊಸ ಯೋಜನೆಗಳನ್ನು ಕೈಗೊಳ್ಳಲು ಸಮಿತಿ ನೀಡಿದ ಸಲಹೆಗಳನ್ನು ಪರಿಗಣಿಸಲಾಗಿಲ್ಲ. ಬದಲಿಗೆ ಅವುಗಳನ್ನು ನಿರಾಕರಿಸಲಾಯಿತು ಅಥವಾ ನಗರ ಸಭೆ ಅಥವಾ ಇತರೇ ಇಲಾಖೆಗಳಿಗೆ ವರ್ಗಾಹಿಸಲಾಯಿತು.

ವಿಶೇಷ ಉದ್ದೇಶಿತ ವಾಹಕದ ನಿಜಾರ್ಥದ ಜಾರಿ

ತುಮಕೂರು ಸ್ಮಾರ್ಟ್ಸಿಟಿ ಕಂಪನಿಗೆ ನೀಡಲಾದ ಸ್ವಾತಂತ್ರ ಹಾಗೂ ಸ್ವಾಯತ್ತತೆ ನಗರಾಭಿವೃದ್ಧಿಗಾದ ಹೊಸ ವಿಧಾನದ ಸಕಾರಾತ್ಮಕ ಆಯಾಮ ಎಂದು ಕಂಪನಿ ಅಧಿಕಾರಿಗಳು ಅದು ಮುಂದುವರೆಯಬೇಕೆಂದು ಒತ್ತಾಯ ಮಾಡುತ್ತಿದ್ದರೇ, ಸ್ಲಂ ನಿವಾಸಿ ಸಂಘಗಳು, ಪೌರಕಾರ್ಮಿಕರ ಸಂಘಗಳು, ಲೈಂಗಿಕ ಕಾರ್ಯಕರ್ತರ ಸಂಘ, ಬೀದಿ ವ್ಯಾಪಾರಿಗಳ ಸಂಘ ಮುಂತಾದವು ಈ ಕಂಪನಿ ಮೂಲಕ ನಗರಾಭಿವೃದ್ಧಿ ಯೋಜನೆಯನ್ನು ಜಾರಿ ಮಾಡುವುದನ್ನು ಒಪ್ಪಲು ನಿರಾಕರಿಸಿದರು. ಈ ಕಂಪನಿಯು ಯಾರಿಗೂ ಕೂಡಾ ಬದ್ಧತೆ ಹೊಂದಿಲ್ಲ ಹಾಗೂ ನಮ್ಮಂಥವರು ಸಂಪರ್ಕಿಸಲು ಸಾಧ್ಯವಿಲ್ಲ ಎಂಬುದು ಅವರ ನೋವಿನ ಅಳಲಾಗಿತ್ತು. ಈ ಕಂಪನಿಯು ಸಾರ್ವಜನಿಕ ವಲಯವಾಗಿ ಕೆಲಸ ಮಾಡುವ ಬದಲು ಖಾಸಗೀ ಕಂಪನಿಯಂತೆ ಕಾರ್ಯ ನಿರ್ವಹಿಸುವುದಾಗಿ ಅವರು ದೂರುತ್ತಿದ್ದರು. ನಿಜವೇನೆಂದರೇ ನಗರ ಸಭೆಯ ಸದಸ್ಯರು ಕೂಡಾ ತಮ್ಮ ಭಾಗವಹಿಸುವಿಕೆ ಇಲ್ಲದೇ ಅವರ ಅರಿವಿಗೂ ಬರದೇ ವಾರ್ಡ್ಗಳಲ್ಲಿ ಯೋಜನೆಯನ್ನು ಜಾರಿಗೊಳಿಸಿದ್ದು ಜನರಿಗೆ ತೊಂದರೆಯಾಗುತ್ತಿದೆ. ಸ್ಥಳೀಯ ಪಾಲಿಕೆ ಸದಸ್ಯರನ್ನ ಇದರ ಸಂಬಂಧಪಟ್ಟಂತೆ ಸಂಪರ್ಕಿಸಿದಾಗ ಆ ಸಮಸ್ಯೆಯನ್ನು ಬಗೆಹರಿಸಲು ಅವರಿಗೆ ಅವಕಾಶವೇ ಇಲ್ಲ. ನಗರಸಭೆಯ ೫ ವರ್ಷಗಳ ಖರ್ಚು ವೆಚ್ಚವು ೮೮೨ ಕೋಟಿಗಳಾಗಿದ್ದು, ಈ ಸ್ಮಾರ್ಟ್ಸಿಟಿ ಕಾರ್ಪೋರೇಷನ್ ಇದೇ ಅವಧಿಯಲ್ಲಿ ವೆಚ್ಚ ಮಾಡುವ ಹಣ ೯೬೦ ಕೋಟಿಗಳಾಗಿದೆ. ಅದು ನಗರ ಸಭೆ ಬಜೆಟ್‌ಗಿಂತ ದೊಡ್ಡದಾಗಿದೆ. ಸ್ಮಾರ್ಟ್ಸಿಟಿ ಕಾರ್ಪೋರೇಷನ್ ಕಂಪನಿಯು ನಗರ ಜನರಿಂದ ಚುನಾಯಿತರಾದ ನಗರ ಸಭೆಯ ಕೌನ್ಸಿಲ್‌ಗೆ ಸಮಾನಾಂತರ ಇಲಾಖೆಯಂತೆ ವರ್ತಿಸುತ್ತಿದ್ದು, ಅವರಿಗೆ ನಗರ ಸಭೆಗಿಂತಲೂ ಹೆಚ್ಚು ಹಣ ನೀಡಿರುವುದಾಗಿದೆ. ನಗರ ಸಭೆಯು ತನ್ನ ಹಣವನ್ನು ಸಂಪೂರ್ಣ ನಗರದ ಅಗತ್ಯಗಳಿಗೆ ಖರ್ಚು ಮಾಡುತ್ತಿದೆ. ಆದರೆ ಸ್ಮಾರ್ಟ್ಸಿಟಿ ಕಂಪನಿಯ ಬಹುಪಾಲು ಹಣ ನಗರದ ಶೇ. ೧೪ ರಷ್ಟು ಪ್ರದೇಶಕ್ಕೆ ಮಾತ್ರ ಮೀಸಲಾಗಿದೆ. ಇವು ರಾಜಕೀಯ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾದುದು ಕೂಡ. ಇದರಲ್ಲಿ ಎಲ್ಲಾ ವಾರ್ಡ್ಗಳು ಪ್ರಾತಿನಿಧ್ಯವನ್ನು ಖಾತರಿಗೊಳಿಸಲಿಲ್ಲ. ಪ್ರಜಾಪ್ರಭುತ್ವ ರಾಜಕೀಯ ಬದ್ಧತೆ ವ್ಯವಸ್ಥೆ ಯಾವುದು ಇದಕ್ಕೆ ಇಲ್ಲ. ನಗರ ಸಭೆ ಮಾಡುವಂತೆ ವಾರ್ಡ್ ಮಟ್ಟದ ಹಣಕಾಸು ಮೀಸಲು ಸಮಸ್ಯೆಯಾದಾಗ ಪರಿಹರಿಸುವ ವ್ಯವಸ್ಥೆ ಈ ಸ್ಮಾರ್ಟ್ಸಿಟಿ ಕಂಪನಿಯ ವ್ಯವಸ್ಥೆಯಲ್ಲಿ ಇಲ್ಲವೇ ಇಲ್ಲ.

ನಗರಸಭೆ ವ್ಯವಸ್ಥೆಯು ರಾಜಕೀಯ ಬದ್ಧತೆ ಹಾಗೂ ನ್ಯಾಯದ ವಿತರಣೆಯಲ್ಲಿ ವಂಚಿತ ಸಮುದಾಯಗಳನ್ನು ಒಳಗೊಂಡಿದೆ. ಉದಾಹರಣೆಗೆ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡಗಳ ಹಣಕಾಸು ಮೀಸಲಿಡುವುದನ್ನು ಖಾತ್ರಿ ಗೊಳಿಸಲು ಕಾಯಿದೆ ಹಾಗೂ ನಿಯಮಗಳಿವೆ. ಅದು ಈ ಸಮುದಾಯಗಳಿಗೆ ತಮ್ಮ ಬಜೆಟ್‌ನಲ್ಲಿ ಶೇ. ೨೦.೧೦ ರಷ್ಟು ಹಣವನ್ನು ಖರ್ಚು ಮಾಡಲೇಬೇಕು. ಆ ಹಣವನ್ನು ಇತರೇ ಯೋಜನೆಗಳಿಗೆ ಬಳಸುವಂತಿಲ್ಲ ಎಂಬುದನ್ನು ಕಾಯಿದೆಯೇ ಖಾತ್ರಿಗೊಳಿಸುತ್ತದೆ. ಒಂದು ವೇಳೆ ಮೀಸಲಿಟ್ಟ ಹಣ ಆ ವರ್ಷದಲ್ಲಿ ಖರ್ಚು ಆಗದೇ ಇದ್ದಲ್ಲಿ ಅದನ್ನು ಅದೇ ಖಾತೆಯಲ್ಲಿಟ್ಟು, ಮುಂದಿನ ವರ್ಷದ ೨೪.೧೦ರ ಅವರ ಬಜೆಟ್ ಹಣವನ್ನು ಆ ಖಾತೆಯಲ್ಲಿ ಜಮೆ ಮಾಡಿ, ಒಟ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೇ ಸ್ಮಾರ್ಟ್ಸಿಟಿ ಯೋಜನೆಯ ತುಮಕೂರಿನ ಸಂಪೂರ್ಣ ಹಣ ೯೩೦ ಕೋಟಿಗಳು ಈ ಸಾಮಾಜಿಕ ನ್ಯಾಯದ ಕಾನೂನುಗಳು ಇದಕ್ಕೆ ಅನ್ವಯವಾಗುವುದಿಲ್ಲ. ಇದರ ಜೊತೆಗೆ ನಗರ ಸಭೆಯು ಈ ಹಣದ ಮೀಸಲೊಂದಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡವಲ್ಲದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶೇ. .೨೦ ರಷ್ಟು ಹಣವನ್ನು ಮೀಸಲಿಡಬೇಕಾಗಿದೆ. ಒಟ್ಟಾರೆ ನಗರ ವಂಚಿತ ಸಮುದಾಯಗಳಿಗೆ ನಗರ ಸಭೆಯ ಬಜೆಟ್‌ನಲ್ಲಿ ಶೇ. ೩೧.೩೫ ರಷ್ಟು ಹಣ ಮೀಸಲಾಗಿದೆ. ಆದರೆ ಸ್ಮಾರ್ಟ್ಸಿಟಿ ಯೋಜನೆಯ ಹಣದಲ್ಲಿ ೨೨೪.೧೩ ಕೋಟಿ ರೂಪಾಯಿಗಳನ್ನು ನಗರ ಸಭೆ ಮೂಲಕ ವೆಚ್ಚ ಮಾಡಲಾಗುವುದು ಎಂದು ಹೇಳಲಾಗಿದೆ ಹಾಗೂ ನಗರ ಸಭೆಯೇ ಈಗಾಗಲೇ ವೆಚ್ಚ ಮಾಡುತ್ತಿರುವ ಹಣ ಕಾನೂನು ಬದ್ಧವಾಗಿರುವುದೇ ಆಗಿದೆ.

ಸ್ಮಾರ್ಟ್ ಸಿಟಿ ಯೋಜನೆಯು ವೆಚ್ಚ ಮಾಡುವ ದೊಡ್ಡ ಮಟ್ಟದ ಹಣವನ್ನು ನಗರದ ಶ್ರೀಮಂತರು ಮೇಲ್ಜಾತಿಗಳು ವಾಸ ಮಾಡುವ ಸಣ್ಣ ಪ್ರದೇಶ ಹಾಗೂ ಅವರ ಆದ್ಯತೆಗಳಿಗೆ ಅನುಗುಣವಾಗಿ ವೆಚ್ಚ ಮಾಡುತ್ತಿದೆ. ಇದರಲ್ಲಿ ನಗರ ವಂಚಿತ ಸಮುದಾಯಗಳಿಗೆ ಅವಕಾಶವೇ ಇಲ್ಲ. ನಗರಗಳಲ್ಲಿ ಜಾತಿ ವ್ಯವಸ್ಥೆ ಹೊಸ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಇದು ರೂಪಕವಾಗಿದೆ.

ಮೊದಲು ಪ್ರಕಟವಾದದ್ದು ಸ್ಲಂ ಜಗತ್ತು ಮಾಸಪತ್ರಿಕೆಯಲ್ಲಿ

Centre for Financial Accountability is now on Telegram. Click here to join our Telegram channel and stay tuned to the latest updates and insights on the economy and finance.

Your email address will not be published. Required fields are marked *

*